ಕೂಪರ್, ಪೀಟರ್
1791-1883. ಅಮೆರಿಕದ ಆವಿಷ್ಕಾರಕ, ಕೈಗಾರಿಕೋದ್ಯಮಿ, ದಾನಿ. ಹುಟ್ಟಿದ್ದು ನ್ಯೂಯಾರ್ಕಿನಲ್ಲಿ. 1828ರಲ್ಲಿ ಬಾಲ್ಟನ್‍ನಲ್ಲಿ ಕ್ಯಾನ್‍ಟನ್ ಕಬ್ಬಿಣ ಕಾರ್ಖಾನೆಯನ್ನು ಸ್ಥಾಪಿಸಿದ. ಮೊತ್ತಮೊದಲಿಗೆ ರೈಲುಕಂಬಿಯ ಮೇಲೆ ಯಶಸ್ವಿಯಾಗಿ ಓಡಾಡುವಂಥ ರೈಲು ಎಂಜಿನನ್ನು ಕಂಡುಹಿಡಿದ (1830). ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಂತಿ ವ್ಯವಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ.  ನ್ಯೂಯಾರ್ಕ್ ನಗರದಲ್ಲಿ ಸಾರ್ವಜನಿಕ ಶಾಲಾವ್ಯವಸ್ಥೆಯನ್ನು ರೂಪಿಸಿದ. ಕೂಪರ್ ಯೂನಿಯನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಬಡವರ ಹಾಗೂ ಕೂಲಿಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾದಿಮಾಡಿಕೊಟ್ಟ. 1876ರಲ್ಲಿ ಗ್ರೀನ್‍ಬ್ಯಾಕ್ ಸಂಸ್ಥೆಯಿಂದ ಅಮೆರಿಕದ ಅಧ್ಯಕ್ಷಪದವಿಗೆ ಈತ ಸ್ಪರ್ಧಿಸಿದ್ದುಂಟು.                 *